ನಾವು ನಡೆಸುತ್ತಿರುವ ಸಾಂಸ್ಕೃತಿಕ ಅಧ್ಯಯನಗಳಲ್ಲಿ ಸಾಹಿತ್ಯವನ್ನು
ಕುರಿತಂತೆ ಸ್ಪಷ್ಟವಾದ ಪಕ್ಷಪಾತವಿದೆ. ಈ ಪಕ್ಷಪಾತವು ಹಸ್ತಪ್ರತಿಗಳ ಸಂಗ್ರಹ, ಸಂಪಾದನೆ ಮತ್ತು ಪ್ರಕಟಣೆಗಳ
ಕ್ಷೇತ್ರದಲ್ಲಿಯೂ ನುಸುಳಿದೆ. ಇದು ಜ್ಞಾನಸಂಬಂಧಿಯಾದ ಹಸ್ತಪ್ರತಿಗಳ ಸಂದರ್ಭದಲ್ಲಿ ದೊಡ್ಡ ಸಮಸ್ಯೆಯಾಗಿದೆ.
ಅವುಗಳನ್ನು ಬಹುದೂರದ ನಂಟರಂತೆ ಅನಾದರದಿಂದ ನೋಡುವ ಪ್ರವೃತ್ತಿಯಿದೆ. ಪಾಶ್ಚಾತ್ಯವಾದ ವೈಜ್ಞಾನಿಕ
ತಿಳಿವಳಿಕೆಯ ಕಡೆಗಿನ ಒಲವು ಮತ್ತು ಆ ಒಲವಿನ ಫಲವಾಗಿಯೇ ದೇಶೀ ತಿಳಿವಳಿಕೆಗಳೆಲ್ಲವೂ ಮೂಢನಂಬಿಕೆಗಳ
ಮೊತ್ತವೆಂಬ ತಿರಸ್ಕಾರವು ಬಹುದಿನಗಳವರೆಗೆ ತಾನೇತಾನಾಗಿತ್ತು. ಇಂಥ ತಿಳಿವಳಿಕೆಯು ಪರೀಕ್ಷೆಗೆ ಒಳಪಟ್ಟಿಲ್ಲವೆಂಬ
ಭಾವನೆಯೂ ಇಲ್ಲಿ ಕೆಲಸ ಮಾಡುತ್ತಿತ್ತು. ಇದೆಲ್ಲದರ ಫಲವಾಗಿ ಅಗಾಧವಾದ ದೇಶೀ ತಿಳಿವಳಿಕೆ ಮತ್ತು ಮಾಹಿತಿಗಳು
ನಷ್ಟವಾಗಿವೆ. ನಮ್ಮ ವಿಶ್ವವಿದ್ಯಾಲಯಗಳು ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಧೂಳು ತಿನ್ನುತ್ತಿರುವ
ಅನೇಕ ಓಲೆಗರಿಯ ಮತ್ತು ಕಾಗದದ ಹಸ್ತಪ್ರತಿಗಳು ಆಧುನಿಕ ಲೋಕದೊಂದಿಗಿನ ಸಂವಾದಕ್ಕೆ ಅವಕಾಶ ಪಡೆಯುವಂತೆ
ಪ್ರಕಟವಾಗಿಯೇ ಇಲ್ಲ. ಇಂತಹ ಸಂಸ್ಥೆಗಳಾಚೆಗೆ ಇರುವ ಹಸ್ತಪ್ರತಿಗಳಂತೂ ನಾಶವಾಗುತ್ತಿವೆ. ಅಮೂಲ್ಯ ಹಸ್ತಪ್ರತಿಗಳ
ಒಡೆತನವನ್ನು ಹೊಂದಿರುವ ಕುಟುಂಬಗಳು ಅವನ್ನು ಪವಿತ್ರವಾದ ಆಸ್ತಿಯೆಂದು ಭಾವಿಸಿ ಪೂಜಿಸುತ್ತವೆಯೇ ಹೊರತು,
ಅವುಗಳಿಗೆ ಬಿಡುಗಡೆಯ ಭಾಗ್ಯವನ್ನು ಕೊಡುವುದಿಲ್ಲ. ಬಹಳ ಹಿಂದೆಯೇ ಮುದ್ರಿತವಾಗಿ, ಅಪರೂಪವಾಗಿರುವ
ಅಮೂಲ್ಯ ಪುಸ್ತಕಗಳು ಪರಿಷ್ಕರಣ ಮತ್ತು ಮರುಮುದ್ರಣಗಳ ಅವಕಾಶವನ್ನು ಪಡೆಯುವುದಿಲ್ಲ. ಇದೆಲ್ಲದರ ಪರಿಣಾಮವಾಗಿ
ಪಶುವೈದ್ಯ, ವಾಸ್ತುಶಿಲ್ಪ, ವಿಷವೈದ್ಯ, ಮನಶ್ಶಾಸ್ತ್ರ, ರತ್ನಶಾಸ್ತ್ರ,
(Gemology)
ಮುಂತಾದ ವಿಷಯಗಳನ್ನು ಕುರಿತ ಗ್ರಂಥಗಳು ಆಯಾ ಕ್ಷೇತ್ರದಲ್ಲಿ ಪರಿಣಿತರಾದವರ ಗಮನ ಮತ್ತು ಪರಿಶೀಲನೆಗಳ
ಅವಕಾಶವನ್ನೇ ಪಡೆಯುವುದಿಲ್ಲ. ಇಂತಹ ಪರಿಶೀಲನೆಯು ಸಾಧ್ಯವಾಗಬೇಕಾದರೆ, ಅವುಗಳನ್ನು ಸಂಪಾದಿಸಿ, ಆಧುನಿಕ
ಕನ್ನಡ ಮತ್ತು ಇಂಗ್ಲಿಷ್ ಗೆ ಅನುವಾದಿಸಿ, ಅಕರ್ಷಕವಾಗಿ ಹೊರತರುವ ಕೆಲಸ ನಡೆಯಬೇಕು. ಈ ಕೆಳಗೆ ಅಂತಹ
ಕೆಲವು ಹಸ್ತಪ್ರತಿಗಳನ್ನು ಅಗತ್ಯವಾದ ವಿವರಗಳೊಂದಿಗೆ ಕೊಡಲಾಗಿದೆ. ಇದಕ್ಕಿಂತ ಬಹಳ ವಿವರವಾದ ಸೂಚಿಯನ್ನು
ಬೇರೆ ಬೇರೆ ವಿಶ್ವವಿದ್ಯಾಲಯಗಳು, ಪುಸ್ತಕಭಂಡಾರಗಳು ಮತ್ತು ಸಮಸ್ಥೆಗಳು ಸಿದ್ಧಪಡಿಸಿರುವ ವಿವರಣಾತ್ಮಕ
ಸೂಚಿಗಳಿಂದ ಪಡೆಯಬಹುದು. ಇಂಟರ್ನೆಟ್ಟಿನಲ್ಲಿ ದೊರೆಯುವ ಕೆಲವು ಸೂಚಿಗಳನ್ನು ಇಲ್ಲಿ ಪರಿಚಯಿಸಲಾಗಿದೆ.
ಅಪರೂಪದ ಹಸ್ತಪ್ರತಿಗಳು:
- ‘ಬಣ್ಣಾಂತರ ಸೂತ್ರ’,
ಕನ್ನಡ ಅಧ್ಯಯನಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, 1002/ಕೆ.,
133/1, ಸೂತ್ರಗಳು, ಗದ್ಯ, ಲೇಖಕ-ರಾಜಾದಿತ್ಯ, ಕಾಲ-ಕ್ರಿ.ಶ.1120
(ಸುಮಾರು)
- ‘ರಸಶಾಸ್ತ್ರ’,
1401/ಕೆ. 447, ಗದ್ಯ, ಕನ್ನಡ ಅಧ್ಯಯನಸಂಸ್ಥೆ, ಮೈಸೂರು
ವಿಶ್ವವಿದ್ಯಾಲಯ
- ‘ರಸಸಿಂಧೂರ ಮಾಡುವ ಕ್ರಮ’,
ಕನ್ನಡ ಅಧ್ಯಯನಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, 1402/
ಕೆ 175/6, ಗದ್ಯ.
- ‘ರತ್ನಶಾಸ್ತ್ರ’
ಕನ್ನಡ ಅಧ್ಯಯನಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, 1394/
ಕೆ ಬಿ.69, ವಾರ್ಧಕ ಷಟ್ಪದಿ, ಲೇಖಕ-ಚೆಲುವ, ಕಾಲ-ಸುಮಾರು ಕ್ರಿ.ಶ. 1715
- ‘ಮನೆ ಕಟ್ಟುವ ಕೆಲಸ’,
ವಾಸ್ತುಶಿಲ್ಪ, ಕನ್ನಡ ಅಧ್ಯಯನಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ 1251/ಕೆ
283/4 ಶ್ಲೋಕ, ಟೀಕು.
- ‘ಮನೋವಿಕಾರ ನಿರಸನ’,
(ಮನೋವ್ಯಾಧಿಗಳ ಚಿಕಿತ್ಸೆ), ಕನ್ನಡ ಅಧ್ಯಯನಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ 1252/ಕೆ, 264/4, ರಗಳೆ
- ‘ಪಿಂಡೋತ್ಪತ್ಯ’,
(ಗರ್ಭಿಣಿ ಹೆಂಗಸರ ಪೋಷಣೆ, ಚಿಕಿತ್ಸೆ), ಕನ್ನಡ ಅಧ್ಯಯನಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ 901/ಕೆ, 391/2
- ‘ಸ್ವಪ್ನಾಧ್ಯಾಯ’,
(ಕನಸುಗಳು: ಪರಿಣಾಮಗಳು ಮತ್ತು ಚಿಕಿತ್ಸೆ), 1992/ಸ್ವಪ್ನಾಧ್ಯಾಯ ಟೀಕು, ರಂಗಶಾಸ್ತ್ರಿ, ಕಾಲ-ಸುಮಾರು ಕ್ರಿ.ಶ. 1815.
- ‘ವಿಷಚಿಕಿತ್ಸೆ’,
1572 ಕೆ, 439 1, (ಶ್ಲೋಕ ಮತ್ತು ಟೀಕು) ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ (ಕನ್ನಡ ಅಧ್ಯಯನ
ಸಂಸ್ಥೆ)ನ, ‘ಕನ್ನಡ ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ’ಯಿಂದ
- ‘ಯೋಗದ ರಹಸ್ಯ’
(1380/ಕೆ, 322/2
ಶ್ಲೋಕ ಮತ್ತು ಟೀಕು) ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ (ಕನ್ನಡ
ಅಧ್ಯಯನಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ) ‘ಕನ್ನಡ
ಹಸ್ತಪ್ರತಿಗಳ ವರ್ಣನಾತ್ಮಕ ಸೂಚಿ’ಯಿಂದ
- ಮಹಾವೀರಾಚಾರ್ಯನ ‘ಛತ್ತೀಸ
ಗಣಿತ’, ಕಾಲ ಕ್ರಿ.ಶ. ಒಂಬತ್ತನೆಯ ಶತಮಾನ, ಗಣಿತಕ್ಕೆ ಸಂಬಂಧಿಸಿದ ಹಸ್ತಪ್ರತಿಗಳಲ್ಲಿ
ಬಹಳ ಮುಖ್ಯವಾದುದು. ಈ ಪುಸ್ತಕವು 9000 ಗ್ರಂಥಗಳಷ್ಟು ದೊಡ್ಡದು. ಇದು ಸಂಸ್ಕೃತ ಶ್ಲೋಕಗಳು ಮತ್ತು
ಕನ್ನಡ ವ್ಯಾಖ್ಯಾನವನ್ನು ಒಳಗೊಂಡಿದೆ. ಪ್ರಸ್ತುತ ಹಸ್ತಪ್ರತಿಯನ್ನು ಕ್ರಿ.ಶ. 1485 ರಲ್ಲಿ ಪ್ರತಿ
ಮಾಡಲಾಗಿದೆ. (National Institute
of Prakrit Studies and Research, Shravanabelagola)
- ಯತೀಶ್ವರಾಚಾರ್ಯನ ‘ತಿಲೋಯಪನ್ನತಿ’, ಕಾಲ-ಕ್ರಿ.ಶ. ಆರನೆಯ ಶತಮಾನ, ಜೈನಸಿದ್ಧಾಂತಗಳ ಪ್ರಕಾರ ಮೂರು
ಲೋಕಗಳ ಪರಿಕಲ್ಪನೆಯನ್ನು ಕುರಿತು. ಇದು 3006 ಗ್ರಂಥಗಳು ಅಥವಾ ಸ್ಟಾಂಜಾಗಳನ್ನು ಹೊಂದಿರುವ ಪ್ರಾಕೃತ
ಭಾಷೆಯ ಕೃತಿ. (National Institute
of Prakrit Studies and Research, Shravanabelagola)
ಮುಂದಿನ ಓದು ಮತ್ತು ಲಿಂಕುಗಳು:
-
GOVERNMENT ORIENTAL MANUSCRIPTS LIBRARY (GOML) MADRAS
-
A catalogue of the Kannada, Badaga, and Kurg books in the library of the British
Museum –
-
Kannada Collection (At the British Library, London)
-
Moodbidri I - National Informatics Centre, Hyderabad, AP (A Catalogue of 309
manuscripts in Moodabidri)
-
Manuscript - Bhandarkar Oriental Research Institute
|